ಆಕೃತೀಯ ವರ್ಗೀಕರಣ'
ಪ್ರಾಗೈತಿಹಾಸಿಕ ಅವಶೇಷಗಳನ್ನು ಅಭ್ಯಸಿಸಲು ಪುರಾತತ್ತ್ವಜ್ಞರು ಉಪಯೋಗಿರುವ ಒಂದು ವಿಧಾನ (ಟೈಪಾಲಜಿ). ಪ್ರಾಗೈತಿಹಾಸಿಕ ಕಾಲದ ಹಲವಾರು ಆಯುಧಗಳು ಅಥವಾ ಇತರೆ ಸಲಕರಣೆಗಳು ಸಿಕ್ಕಿ ಅವುಗಳ ಕಾಲ ಉದ್ದಿಶ್ಯ ಮುಂತಾದ ವಿಷಯಗಳ ಬಗ್ಗೆ ಬೇರೇನೂ ಮಾಹಿತಿ ದೊರೆಯದಿದ್ದಾಗ ಈ ವಿಧಾನ ಅವುಗಳ ಅಧ್ಯಯನಕ್ಕೆ ಒಂದು ಶಾಸ್ತ್ರೀಯ ದೃಷ್ಟಿಯನ್ನು ನೀಡುತ್ತದೆ. ಮೊದಲು ಆಕೃತಿಯಲ್ಲಿಯ ಸಾಮ್ಯ ಅಥವಾ ವ್ಯತ್ಯಾಸದ ಮೇಲೆ ಸಲಕರಣೆಗಳನ್ನು ಹಲವು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಇದರಿಂದ ಯಾವ ಯಾವ ಗುಂಪಿನವು ಯಾವ ಉದ್ದೇಶಕ್ಕಾಗಿ ಮಾಡಲ್ಪಟ್ಟಿರಬಹುದು, ಅವುಗಳ ತಯಾರಿಕೆಗೆ ಆಯಾ ಸಮಾಜದಲ್ಲಿ ಅವಶ್ಯಕತೆಯೇನಿದ್ದಿರಬಹುದು ಮುಂತಾದ ವಿಷಯಗಳನ್ನು ಊಹಿಸಲು ಸಾಧ್ಯವಿದೆ. ಅಲ್ಲದೆ ಈ ಗುಂಪುಗಳಲ್ಲೂ ಅವುಗಳಲ್ಲಿನ ಸಲಕರಣೆಗಳ ಒರಟು ಅಥವಾ ನಯಗಾರಿಕೆಯ ಆಧಾರದ ಮೇಲೆ ಹಲವು ಉಪ ಗುಂಪುಗಳಾಗಿ ವಿಂಗಡಿಸಿಕೊಂಡು ಏಕೋದ್ದೇಶಕ್ಕಾಗಿಯೆ ತಯಾರಿಸಿದವುಗಳಲ್ಲೂ ಕಾಲ ಕಾಲಕ್ಕೆ ವ್ಯತ್ಯಾಸಗಳು ಹೇಗೆ ತಲೆದೋರುತ್ತಿದ್ದುವು ಎಂಬುದನ್ನೂ ಗುರುತಿಸಬಹುದು.  										
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ